ಖನಿಜ-
ನೈಸರ್ಗಿಕವಾಗಿ ಲಭಿಸುವ ಮತ್ತು ನಿರ್ದಿಷ್ಟವಾದ ರಾಸಾಯನಿಕ ಸೂತ್ರವಿರುವ ಒಂದು ಪದಾರ್ಥ (ಮಿನರಲ್). ಅನುಕೂಲ ಸನ್ನಿವೇಶದಲ್ಲಿ ಮಾತೃಶಿಲಾ ದ್ರವದಿಂದ ರೂಪುಗೊಂಡಾಗ ಖನಿಜ ಉತ್ತಮ ಆಕಾರವನ್ನು ತಳೆಯುತ್ತದೆ. ಇದೇ ಹರಳು. ಈ ಹೊರಾಕೃತಿಗೆ ಮುಖ್ಯ ಕಾರಣ ಉತ್ತಮ ರೀತಿಯ ಒಳ ಅಣುರಚನೆ. ಹಲವಾರು ಬಾರಿ ಒತ್ತಡ ಮತ್ತು ಉಷ್ಣತೆಯಲ್ಲಿನ ಏರುಪೇರುಗಳಿಂದ ಇದು ಬಿಡಿ ಹರಳುಗಳಾಗಿ ರೂಪುಗೊಳ್ಳದೆ ಸಣ್ಣ ಕಣಗಳೋಪಾದಿಯಲ್ಲಿರುವ ಹರಳುಗಳು ಗುಚ್ಛವಾಗಿಯೂ ಸಿಕ್ಕುವುದುಂಟು. ಇವುಗಳಿಗೆ ಯಾವ ತೆರನಾದ ನಿರ್ದಿಷ್ಟ ಆಕಾರವೂ ಇರುವುದಿಲ್ಲ. ಹೀಗಿದ್ದರೂ ಭೌತ ಬೆಳಕಿನ ಪ್ರಸರಣೆಗೂ ಭೌತ ಗುಣಗಳಿಗೂ ಸಂಬಂಧಿಸಿದಂತೆ ಖನಿಜದ ಲಕ್ಷಣಗಳಿಂದ ಅದರ ಸ್ಛಟಿಕ ರೀತಿಯನ್ನು ಸುಲಭವಾಗಿ ಗುರುತಿಸಬಹುದು. ಖನಿಜಗಳು ಮಾತೃಶಿಲಾದ್ರವದ ಆರುವಿಕೆಯಿಂದ ರೂಪುಗೊಳ್ಳುವಾಗ ಅನೇಕ ವ್ಯತ್ಯಾಸಗಳು ತಲೆದೋರಬಹುದು. ದ್ರವ ಬೇಗನೆ ಆರಿ ತಣ್ಣಗಾದಲ್ಲಿ ರೂಪುಗೊಳ್ಳುತ್ತಿರುವ ಖನಿಜಗಳು ಹರಳುಗಳಾಗಿ ಮಾರ್ಪಡಲು ಅಗತ್ಯವಾದ ಕಾಲ ದೊರೆಯದೆ ಕಣಗಳಾಗಿಯೋ ಮುದ್ದೆಗಳಾಗಿಯೋ ಕಾಣಬರುತ್ತವೆ. ಹೀಗೆಯೇ ಮಾತೃಶಿಲಾದ್ರವ ಬಹು ಜಿಗುಟಾಗಿದ್ದಲ್ಲಿ ಅಣುಗಳು ಸುಲಭವಾಗಿ ಪ್ರವಹಿಸಲು ತಡೆಯುಂಟಾಗಿ ಹೆಚ್ಚಿನ ಮೊತ್ತದಲ್ಲಿ ಹರಳುಗಳು ಉಂಟಾಗುವುದಿಲ್ಲ. ಹಲವು ಸಂದರ್ಭಗಳಲ್ಲಿ ರಾಸಾಯನಿಕ ಸಂಯೋಜನೆಯಲ್ಲೂ ಅಲ್ಪಸ್ವಲ್ಪ ಏರುಪೇರುಗಳು ಕಂಡುಬರಬಹುದು. ಆದರೂ ಖನಿಜದ ಒಳರಚನೆಯಲ್ಲಿ ಯಾವ ಬಗೆಯ ತೀವ್ರ ವ್ಯತ್ಯಾಸಗಳು ಕಂಡುಬರಲಾರವು, ಉದಾಹರಣೆಗೆ ಸ್ಛಾಲರೈಟ್ ಎಂಬ ಖನಿಜದ ರಾಸಾಯನಿಕ ಸಂಯೋಜನೆ ಜಿûಂಕ್‍ಸಲ್ಛೈಡ್. ಅಂದರೆ ಸತು ಗಂಧಕದ ಅಣುಗಳು ನಿರ್ದಿಷ್ಟವಾದ ರೀತಿಯಲ್ಲಿ ಗುಂಪುಮಾಡಿ ಸ್ಛಾಲರೈಟ್ ಹರಳುಗಳಾಗುತ್ತವೆ. ಕೆಲವು ವೇಳೆ ಅಲ್ಪಸ್ವಲ್ಪ ಮೊತ್ತದಲ್ಲಿ ಸತುವಿನ ಅಣುಗಳನ್ನು ಕಬ್ಬಿಣದ ಅಣುಗಳು ಸ್ಥಾನಪಲ್ಲಟಗೊಳಿಸಿ ಖನಿಜದ ಚೌಕಟ್ಟಿನಲ್ಲಿ ಅವುಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಹೀಗಿದ್ದರೂ ಖನಿಜದ ಒಟ್ಟಾರೆ ಗುಣಗಳಲ್ಲಿ ಯಾವ ತರವಾದ ಹೆಚ್ಚಿನ ಬದಲಾವಣೆಗಳೂ ಕಂಡು ಬರುವುದಿಲ್ಲ.

ಖನಿಜ ಸ್ವರೂಪ: ವಿವಿಧ ಮೂಲಧಾತುಗಳ ರಾಸಾಯನಿಕ ಸಂಯೋಗವೇ ಖನಿಜ. ಅನುಕೂಲಕರವಾದ ಉಷ್ಣ ಮತ್ತು ಒತ್ತಡಗಳಿರುವ ಸನ್ನಿವೇಶದಲ್ಲಿ ಈ ಸಂಯೋಗವಾದಾಗ ಖನಿಜಾಣುಗಳು ನಿರ್ದಿಷ್ಟವಾದ ರೀತಿಯಲ್ಲಿ ಶೇಖರವಾಗುತ್ತವೆ. ಹೀಗಾಗುವುದರಿಂದ ಖನಿಜದ ಹೊರ ಆಕೃತಿ ಚೆನ್ನಾಗಿ ರೂಪಿತವಾಗಿ ಸುಂದರವಾದ ಹರಳುಗಳು ಮೈದೋರುತ್ತವೆ. ಆದರೆ ಪ್ರಕೃತಿಯಲ್ಲಿ ಉಷ್ಣ ಮತ್ತು ಒತ್ತಡಗಳ ಅನುಕೂಲಕರವಾದ ಪರಿಸರ ಕಂಡು ಬರುವುದೇ ಅಪರೂಪ. ಹೀಗಾಗಿ ಖನಿಜಗಳ ಉತ್ತಮ ಹರಳುಗಳು ಸಿಗುವುದು ಬಹು ವಿರಳ. ಅನೇಕ ವೇಳೆ ಅವುಗಳ ಆಕೃತಿಯಲ್ಲಿ ವ್ಯತ್ಯಾಸಗಳುಂಟಾಗಿ ಅವುಗಳ ನೈಜ ಸ್ವರೂಪವೇ ಬದಲಾವಣೆಯಾದಂತೆ ತೋರಿಬರುತ್ತದೆ. ಕೆಲವು ಖನಿಜಗಳಿಗೂ ಈ ಬಗೆಯ ಮಾರ್ಪಾಡುಗಳಿಗೂ ಒಂದು ಬಗೆಯ ನಂಟುತನವಿರುವುದನ್ನು ಕಾಣಬಹುದು. ಬರೈಟ್ ಎಂಬ ಖನಿಜದಲ್ಲಿ ಪರಸ್ಪರ ಎದುರುಬದುರಾಗಿರುವ ಮುಖಗಳಲ್ಲಿ ಒಂದು ಜೊತೆ ಮುಖಗಳು ವಿಪರೀತವಾಗಿ ಬೆಳೆದು ಇಡೀ ಖನಿಜ ಫಲಕಾಕೃತಿಯನ್ನು ತಳೆಯುತ್ತದೆ. ಹಲವು ಸಾರಿ ಬೆರಿಲ್ ಮತ್ತು ಟೂರ್ಮಲೀನ್ ಖನಿಜಗಳಂತೆ ಯಾವುದಾದರೂ ಒಂದು ಅಕ್ಷದ ಉದ್ದಕ್ಕೂ ಹರಳು ಶೀಘ್ರಗತಿಯಲ್ಲಿ ಬೆಳೆದು ಖನಿಜ ತನ್ನ ನೈಜಾಕೃತಿಗೆ ಬದಲಾಗಿ ಸ್ಥಂಭಾಕೃತಿಯನ್ನು ತಳೆಯುವುದೂ ಉಂಟು. ಹಲವು ಖನಿಜಗಳ ಸ್ವರೂಪವನ್ನು ಹೀಗೆ ವಿಪರೀತವಾಗಿ ಬೆಳೆದಿರುವ ಹರಳಿನ ಮುಖಗಳನ್ನು ಅನುಸರಿಸಿ ವಿವರಿಸಬಹುದು. ಲವಣ (ಹ್ಯಾಲೈಟ್) ಮತ್ತು ಫ್ಲೂರ್‍ಸ್ಪಾರ್ ಖನಿಜಗಳಲ್ಲಿ ಚಚ್ಚೌಕವಾದ ಆಕೃತಿ ಬಹು ಚೆನ್ನಾಗಿ ಕಂಡುಬರುವುದರಿಂದ ಅವುಗಳ ಸ್ವರೂಪವನ್ನು ಚಚ್ಚೌಕ ಸ್ವರೂಪವೆಂದೂ ಅದೇ ರೀತಿ ವಜ್ರ ಮ್ಯಾಗ್ನೆಟೈಟುಗಳ ಸ್ವರೂಪವನ್ನು ಅಷ್ಟಮುಖ ಸ್ವರೂಪವೆಂದೂ ಕ್ಯಾಲ್ಸೈಟ್ ಮತ್ತು ಡಾಲೊಮೈಟುಗಳ ಆಕೃತಿಯನ್ನು ರಾಂಬೊಹೀಡ್ರಲ್ ಸ್ವರೂಪವೆಂದೂ ಶುದ್ಧ ರೂಪದ ಗಂಧಕ ಹರಳುಗಳ ಆಕೃತಿಯನ್ನು ಪಿರಮಿಡಲ್ ಸ್ವರೂಪವೆಂದೂ ವರ್ಣಿಸಲಾಗಿದೆ.

	ಅನೇಕ ಖನಿಜಗಳು ಬಿಡಿ ಹರಳುಗಳಾದ ರೂಪುಗೊಳ್ಳುವುದರ ಬದಲು ಅಸ್ಪಷ್ಟಾ ಕೃತಿಯ ಹರಳುಗಳ ಗುಚ್ಛಗಳಾಗಿ ರೂಪಿತವಾಗುತ್ತವೆ. ಅನೇಕ ಬಾರಿ ಈ ತೆರನಾದ ಕ್ರೋಡೀಕರಣ ಹಲವಾರು ವಿಶೇಷ ರೀತಿಯ ಸ್ವರೂಪಗಳನ್ನೇ ಉಂಟು ಮಾಡಬಹುದು. ಇವುಗಳಲ್ಲಿ ಮುಖ್ಯವಾದವು: 1 ನಾರಿನ ಸ್ವರೂಪ-ಕಲ್ನಾರು, ಸ್ಯಾಟಿನ್ ಸ್ಪಾರ್ ಮೊದಲಾದ ಖನಿಜಗಳು ಸೂಕ್ಷ್ಮವಾದ ನಾರು ಅಥವಾ ನೂಲಿನ ಎಳೆಗಳಂತೆ ಕಂಡು ಬರುತ್ತವೆ. ನೀಳವಾದ ಸ್ತಂಭಾಕೃತಿ ಹಾರ್ನ್‍ಬ್ಲೆಂಡ್ ಖನಿಜದಲ್ಲಿ ಉತ್ತಮವಾಗಿ ರೂಪಿತವಾಗಿದೆ. 2 ಅಲಗು ಸ್ವರೂಪ-ಚಾಕುವಿನ ಅಲಗಿನ ಆಕಾರವನ್ನು ಟಾಲ್ಕ್ ಮೊದಲಾದ ಖನಿಜಗಳು ತಳೆಯುತ್ತವೆ. ಖನಿಜದ ತೆಳುವಾದ ಅಲಗುಗಳು ಪದರಗಳಂತೆ ಒಂದರ ಮೇಲೊಂದು ಒಟ್ಟುಗೂಡಿದ್ದು ಖನಿಜಕ್ಕೆ ಒಂದು ಬಗೆಯ ವಿಶಿಷ್ಟ ಸ್ವರೂಪ ಬರುತ್ತದೆ. 3 ಕಣಸ್ವರೂಪ-ವಿವಿಧ ಗಾತ್ರದ ಕಣಗಳ ಒಟ್ಟುಗೂಡುವಿಕೆಯಿಂದ ಉಂಟಾದ ಹೊರ ರೂಪ. ಇದು ಸುಣ್ಣಶಿಲೆಗೆ ಸಂಬಂಧಿಸಿದ ಖನಿಜಗಳಲ್ಲಿ ಬಹು ಚೆನ್ನಾಗಿ ಸ್ಛುಟಗೊಂಡಿರುತ್ತದೆ. 4 ಮಿಥ್ಯಾರೂಪ ಹಲವು ಸಂದರ್ಭಗಳಲ್ಲಿ ಚಿತ್ರವಿಚಿತ್ರವಾದವುಗಳನ್ನೂ ಕಾಣಬಹುದು. ಕಬ್ಬಿಣದ ಮುಖ್ಯ ಅದುರಾದ ಹಿಮಟೈಟ್ ಎಂಬ ಖನಿಜ ಮಾತ್ರ ಪಿರಮಿಡಾಕೃತಿಯನ್ನು ತಳೆಯುತ್ತದೆ. ಹಲವು ವೇಳೆ ಇದೇ ಖನಿಜ ದ್ರಾಕ್ಷಿ ಹಣ್ಣುಗಳ ಗೊಂಚಲಿನಾಕಾರವನ್ನೂ ತಳೆಯುವುದುಂಟು. ಡಾಲೊಮೈಟ್ ಸಹ ಈ ಸ್ವರೂಪವನ್ನು ಆಗಾಗ ತಳೆಯುವುದಿದೆ. 

	ಮ್ಯಾಲಕೈಟ್ ಎಂಬ ತಾಮ್ರದ ಅದುರಿನ ಖನಿಜ ದುಂಡನೆಯ ಗುಮ್ಮಟದ ಆಕಾರವನ್ನು ತೋರುತ್ತದೆ. ಇದನ್ನು ಸ್ತನಾಕೃತಿಯೆಂದೂ ಕರೆಯುವುದುಂಟು. ಮ್ಯಾಂಗನೀಸಿನ ದ್ರಾವಣ ಶಿಲೆಗಳ ಸೀಳು ಮತ್ತು ಬಿರುಕುಗಳಲ್ಲಿ ಪ್ರವಹಿಸಿ ಮ್ಯಾಂಗನೀಸ್ ಆಕ್ಸೈಡ್ ಆಗಿ ಪರಿವರ್ತಿತವಾಗುತ್ತದೆ. ಅಲ್ಲದೆ ಮರದ ಕೊಂಬೆ ರೆಂಬೆಗಳೋಪಾದಿಯ ವೃಕ್ಷಾಕೃತಿಯನ್ನಾಗಲಿ ಪಾಚಿಯಂತಿರುವ ಆಕಾರವನ್ನಾಗಲಿ ಪಡೆಯುತ್ತದೆ. ಕ್ಯಾಲ್ಸೈಟ್, ಪೈರಿಟಿಸ್, ಹಿಮಟೈಟ್ ಮತ್ತು ಸಿಲಿಕ (ಚೆರ್ಟ) ಇವೇ ಮುಂತಾದ ಖನಿಜಗಳು ದುಂಡನೆಯ ಸಣ್ಣ ಸಣ್ಣ ಕಣಗಳೋಪಾದಿಯಲ್ಲಿದ್ದು ತಮ್ಮ ಶೇಖರಣೆಯಿಂದ ಊಲಿಟಿಕ್ ಎಂಬ ವಿಶಿಷ್ಟ ಸ್ವರೂಪವನ್ನು ಪಡೆಯುತ್ತವೆ.

	ಸೂಜಿಯಂತೆ ನೀಳವಾಗಿರುವ ಖನಿಜಗಳು ಕೇಂದ್ರವೊಂದರಿಂದ ನಾನಾ ದಿಕ್ಕಿಗೆ ಪ್ರಸರಿಸಿ ಮಿನುಗುವ ನಕ್ಷತ್ರಗಳನ್ನು ಹೋಲುವುದರಿಂದ ಇದನ್ನು ನಕ್ಷತ್ರಾಕಾರವೆಂದು ಕರೆಯಲಾಗಿದೆ. ವೇಪಿಲೈಟ್ ಎಂಬ ಖನಿಜದ ಸ್ವರೂಪ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಖನಿಜಗಳು ಶುದ್ಧ ರೂಪದ ತಾಮ್ರ ಮತ್ತು ಬೆಳ್ಳಿ ತಂತಿಗಳಂತೆಯೋ ಸೂಕ್ಷ್ಮ ಕೊಳವೆಗಳಂತೆಯೋ ಕಂಡುಬರುತ್ತವೆ. ಇವು ನೇರವಾಗಿ ಅಥವಾ ತುಸು ಬಾಗಿರುತ್ತವೆ. ಇಂಥ ರೂಪಕ್ಕೆ ತಂತುರೂಪ ಎಂದು ಹೆಸರು. ಕ್ಯಾಲ್ಸೈಟ್ ಮತ್ತು ಮ್ಯಾಂಗನೀಸಿನ ಪ್ರಮುಖ ಅದುರಾದ ಸೈಲೊಮೆಲೀನ್ ಅನೇಕ ವೇಳೆ ಗೊಂಚಲು ಗೊಂಚಲಾಗಿರುತ್ತವೆ. ಅರ್ಯಾಗೊನೈಟ್ ಎಂಬ ಖನಿಜ ಹವಳಗಳನ್ನು ಹೋಲುವ ಸ್ವರೂಪವನ್ನು ಪಡೆಯುವುದುಂಟು.
ಖನಿಜ ಕಾಠಿಣ್ಯ: ಖನಿಜಗಳ ಮೂಲ ಗುಣಗಳಲ್ಲಿ ಕಾಠಿಣ್ಯವೂ (ಹಾರ್ಡ್‍ನೆಸ್) ಒಂದು. ಒಂದು ಖನಿಜವನ್ನೊ ಅದರ ನಯವಾದ ಭಾಗವನ್ನೊ ಉಜ್ಜಿದಾಗ ಅಥವಾ ಗೀರಿದಾಗ ಅಥವಾ ಗೀರಲುಪ್ರಯತ್ನಿಸಿದಾಗ ತೋರಿಬರುವ ಖನಿಜದ ಪ್ರತಿಕ್ರಿಯೆಯನ್ನು ಕಾಠಿಣ್ಯವೆಂದು ವಿವರಿಸಬಹುದು. ಸಾಮಾನ್ಯವಾಗಿ ಖನಿಜವನ್ನು ಉಗುರು, ತಾಮ್ರದ ನಾಣ್ಯ,ಚಾಕುವಿನ ಅಲಗು ಅಥವಾ ಇನ್ನೊಂದು ಖನಿಜದಿಂದ ಗೀರಿ ಅದರ ಕಾಠಿಣ್ಯವನ್ನು ನಿರ್ಧರಿಸಬಹುದು. ಈ ಬಗೆಯ ನಿರ್ಧಾರದಲ್ಲಿ ಖನಿಜಗಳ ಸಾಪೇಕ್ಷ ಮೌಲ್ಯಗಳ ಅರಿವಾಗುತ್ತದೆಯೇ ಹೊರತು ಸಾಪೇಕ್ಷ ಮೌಲ್ಯಗಳ ಅರಿವಾಗುತ್ತದೆಯೇ ಹೊರತು ಅವುಗಳ ನಿರ್ದಿಷ್ಟ ಕಾಠಿಣ್ಯಗೊತ್ತಾಗಲಾರದು. ಇದನ್ನು ನಿರ್ಧರಿಸಲು ಮ್ಹೋ ಎಂಬ ಖನಿಜ ವಿಜ್ಞಾನಿ ತಯಾರಿಸಿರುವ ಕಾಠಿಣ್ಯ ಕ್ರಮವನ್ನು ಅನುಸರಿಸುತ್ತೇವೆ. ಇದಕ್ಕೆ ಮ್ಹೋನ ಕಾಠಿಣ್ಯದ ಅಳತೆ ಪಟ್ಟಿ ಎಂದು ಹೆಸರು. ಈ ಅನುಕ್ರಮಣಿಕೆಯಲ್ಲಿ ಹತ್ತು ಖನಿಜಗಳನ್ನು ಅವುಗಳ ಕಾಠಿಣ್ಯಕ್ಕೆ ಅನುಗುಣವಾಗಿ ಜೋಡಿಸಲಾಗಿದೆ: 1 ಟಾಲ್ಕ್, 2 ಜಿಪ್ಸಂ, 3 ಕ್ಯಾಲ್ಸೈಟ್, 4 ಪ್ಲೂರ್‍ಸ್ಪಾರ್, 5 ಅಪಟೈಟ್, 6 ಫೆಲ್ಸ್‍ಪಾರ್, 7 ಕ್ವಾಟ್ರ್ಸ್, 8 ಟೋಪಾಸ್, 9 ಕೊರಂಡಂ, 10 ವಜ್ರ. ಈ ಪಟ್ಟಿಯಲ್ಲಿ ಖನಿಜಗಳ ಕಾಠಿಣ್ಯ ಅನುಕ್ರವiವಾಗಿ ಟಾಲ್ಕ್‍ನಿಂದ ವಜ್ರದತ್ತ ಹೆಚ್ಚುತ್ತ ಹೋಗುತ್ತದೆ. ಇದರಂತೆ ಟಾಲ್ಕ್‍ನ ಕಾಠಿಣ್ಯ ಒಂದು ಎಂದೂ ವಜ್ರದ ಕಾಠಿಣ್ಯ ಹತ್ತು ಎಂದೂ ಪರಿಗಣಿಸಲಾಗಿದೆ. ಟಾಲ್ಕನ್ನು ಸುಲಭವಾಗಿ ಉಗುರಿನಿಂದ ಗೀರಬಹುದು. ಅಂದರೆ ಹೇಗೆ ಗೀರಲು ಸಾಧ್ಯವಾಗುವ ಖನಿಜಗಳ ಕಾಠಿಣ್ಯ 2 ಎಂದು ಭಾವಿಸಲಾಗಿದೆ. ವಜ್ರವೇ ಅತ್ಯಂತ ಹೆಚ್ಚಿನ ಕಾಠಿಣ್ಯ ಉಳ್ಳದ್ದು. ಅದನ್ನು ಗೀರಲು ಮತ್ತೊಂದು ವಜ್ರವೇ ಬೇಕು. ಪಟ್ಟಿಯಲ್ಲಿನ ಮೇಲಿನ ಖನಿಜಗಳನ್ನು ಕೆಳಗಿನ ಖನಿಜಗಳಿಂದ ಗೀರಲು ಸಾಧ್ಯ. ಜಿಪ್ಸಮನ್ನು (2) ಒಂದು ಖನಿಜ ಗೀರುತ್ತದೆ, ಆದರೆ ಕ್ಯಾಲೈಟಿನಿಂದ (3) ಗೀರಿಸಿಕೊಳ್ಳುತ್ತದೆ ಎಂದು ಭಾವಿಸೋಣ. ಆಗ ಅದರ ಸ್ಥಾನ 2 ಮತ್ತು 3ರ ನಡುವೆ ಉಂಟು; ಅದರ ಕಾಠಿಣ್ಯ 2.5 ಎಂದು ಹೇಳಬಹುದು. ಸಾಮಾನ್ಯವಾಗಿ ಅಂದಾಜಿನ ಮೇಲೆ ಖನಿಜಗಳ ಕಾಠಿಣ್ಯವನ್ನು ನಿರ್ಧರಿಸಲಾಗುವುದು. ಸುಮಾರು 2.5ರ ತನಕ ಕಾಠಿಣ್ಯ ವಿರುವ ಖನಿಜಗಳನ್ನು ಉಗುರಿನಿಂದ ಗೀರಬಹುದು. ಹೀಗೆಯೇ ತಾಮ್ರದ ಕಾಠಿಣ್ಯ 3. ಚಾಕುವಿನ ಅಲಗು 5.5, ಗಾಜು 5.5 ಮತ್ತು ಉಕ್ಕಿನ ಅರ 6.5.

	ಕಾಠಿಣ್ಯಾಂಕಗಳು ಖನಿಜಗಳ ಕಾಠಿಣ್ಯದಲ್ಲಿರುವ ತಾರತಮ್ಯವನ್ನು ಸೂಚಿಸುತ್ತ ಹೀಗೆಯೇ ವಿನಾ ಒಂದು ಖನಿಜಗಳ ಶುದ್ಧ ಕಾಠಿಣ್ಯವನ್ನು ಎಂದಿಗೂ ಸೂಚಿಸುವುದಿಲ್ಲ. ಹೀಗೆಯೇ 10ನೆಯ ಸ್ಥಾನದ ವಜ್ರ ಕಾಠಿಣ್ಯ 1ನೆಯ ಸ್ಥಾನದ ಟಾಲ್ಕ್‍ಗಿಂತ ಹತ್ತರಷ್ಟು ಹೆಚ್ಚಾದುದು ಎಂದು ಭಾವಿಸಬಾರದು. ಪಟ್ಟೆಯಲ್ಲಿನ ಖನಿಜಗಳ ಪರಸ್ಪರ ಅಂತರ ಏಕರೀತಿಯದಾಗಿರಬೇಕಾಗಿಲ್ಲ. ಒಟ್ಟಿನಲ್ಲಿ ಇದೊಂದು ಅಂದಾಜಿನ ಮೇಲೆ ಕಾಠಿಣ್ಯವನ್ನು ನಿರ್ಧರಿಸುವ ಕ್ರಮ ಎನ್ನಬಹುದು. ಕಾಠಿಣ್ಯವನ್ನು ನಿರ್ಧರಿಸಲು ಸ್ಕ್ಲೀರೋಮೀಟರ್ ಎಂಬ ಸಾಧನವನ್ನು ಉಪಯೋಗಿಸಬೇಕಾಗುತ್ತದೆ. ಕಾಠಿಣ್ಯವನ್ನು ಅಳೆಯಬೇಕಾದ ಖನಿಜದ ನಯವಾದ ಭಾಗ ಉಪಕರಣದ ಮೊನಚಾದ ಉಕ್ಕಿನ ಸೂಜಿಯನ್ನು ತಾಗುವಂತೆ ಇಡಬೇಕು. ಅನಂತರ ಇದಕ್ಕೆ ತೂಗುಬಿಟ್ಟಿರುವ ತಟ್ಟೆಯಲ್ಲಿ ತೂಕದ ಬಟ್ಟುಗಳನ್ನಿಡಬೇಕು. ಸರಿಯಾದ ತೂಕ ಸೇರಿದಾಗ ಆ ಭಾರಕ್ಕೆ ತಟ್ಟೆ ಜಗ್ಗಿದಂತಾಗಿ ಉಕ್ಕಿನ ಮೊನೆ ಖನಿಜದ ಮೇಲೆ ನಿರ್ದಿಷ್ಟವಾದ ರೀತಿಯಲ್ಲಿ ಗೀರುತ್ತದೆ. ಇದನ್ನು ಅನುಸರಿಸಿ ಕಾಠಿಣ್ಯವನ್ನು ನಿರ್ಧರಿಸಬಹುದು. ಹೆಸರಾಂತ ಖನಿಜ ಶಾಸ್ತ್ರಜ್ಞರಾದ ಷ್ಯಾಫ್, ರೋಸಿವಾಲ್ ಮತ್ತು ಜ್ಯಾಗರ್ ಈ ವಿಧಾನವನ್ನು ಅನುಸರಿಸಿ ಅನೇಕ ಖನಿಜಗಳ ಶುದ್ಧ ಕಾಠಿಣ್ಯವನ್ನು ನಿಖರವಾಗಿ ನಿರ್ಧರಿಸಿದ್ದಾರೆ. ಈ ಬಗೆಯ ಸಂಶೋಧನೆಗಳಿಂದ ಟೋಪಾಸ್ (8) ಮತ್ತು ಕೊರಂಡಮುಗಳ (9) ನಡುವಿನ ಅಂತರ ಟೋಪಾಸ್ (8) ಮತ್ತು ಕ್ವಾಟ್ರ್ಸ್‍ಗಳ (7) ಅಂತರಕ್ಕೂ ಹೆಚ್ಚಿನದೆಂದು ಅಭಿಪ್ರಾಯ ಪಡಲಾಗಿದೆ.

	ಖನಿಜಗಳ ಕಾಠಿಣ್ಯ ಅವುಗಳ ರಾಸಾಯನಿಕ ಸಂಯೋಜನೆಗೆ ಅನುಗುಣವಾಗಿರುತ್ತದೆ. ಸಾಮಾನ್ಯವಾಗಿ ಸಿಲಿಕೇಟ್ ಆಕ್ಸೈಡುಗಳು ಹೆಚ್ಚು ಕಠಿಣವಾಗಿಯೂ ಹೈಡ್ರಾಕ್ಸೈಡುಗಳು ಮಿದುವಾಗಿಯೂ ಇರುತ್ತವೆ. ಇದೇ ಅಲ್ಲದೆ ಕಾಠಿಣ್ಯ ಖನಿಜದ ಒಳ ಅಣುರಚನೆಯನ್ನೂ ಅವಲಂಬಿಸಿರುತ್ತದೆ. ಈ ಅಣು ಚೌಕಟ್ಟಿನಲ್ಲಿ ಅಣುಗಳು ದೂರವಿದ್ದಲ್ಲಿ ಆ ಖನಿಜದ ಕಾಠಿಣ್ಯ ಕಡಿಮೆ; ಹತ್ತಿರವಿದ್ದಲ್ಲಿ ಕಾಠಿಣ್ಯವೂ ಹೆಚ್ಚು.. ಇವೇ ಅಲ್ಲದೆ ಖನಿಜದ ಹರಳುಗಳಲ್ಲಿ ಅಕ್ಷವನ್ನು ಅನುಸರಿಸಿ ಕಾಠಿಣ್ಯ ಉಂಟು. ಇದಕ್ಕೆ ಕಯನೈಟ್ ಅತ್ಯುತ್ತಮ ಉದಾಹರಣೆ. ಈ ಖನಿಜವನ್ನು ಚಾಕುವಿನಿಂದ ಉದ್ದಕ್ಕೂ ಅಷ್ಟು ಶ್ರಮವಿಲ್ಲದೆ ಗೀರಬಹುದು. ಆದರೆ ಅಡ್ಡಲಾಗಿ ಗೀರಲು ಯತ್ನಿಸಿದಾಗ ಅದು ಅಷ್ಟು ಸುಲಭವಲ್ಲ. 		(ಎಂ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ